ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗೆ ಕರಾವಳಿ ಜಿಲ್ಲೆಗಳಿಗೆ ಈ ಹಿಂದಿನಿಂದಲೂ ಕನಿಷ್ಠ ಪ್ರಾತಿನಿಧ್ಯ ಇರುತ್ತಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ಪ್ರಾತಿನಿಧ್ಯವನ್ನು ನೀಡದೆ ನಿರ್ಲಕ್ಷ್ಯ ಮಾಡಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶಿಕ್ಷಕರು ಮತ್ತು ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಭಾಗದಿಂದ ಅಭ್ಯರ್ಥಿಗಳನ್ನು ಪರಿಗಣಿಸದೇ ಇರುವುದು ನೇರವಾಗಿ ಕರಾವಳಿ ಜಿಲ್ಲೆಗಳ ಶಿಕ್ಷಕರ ಹಾಗೂ ಪದವೀಧರರ ಅಸ್ತಿತ್ವವನ್ನೇ ನಿರಾಕರಿಸಿದಂತಾಗಿದೆ. ಆದುದರಿಂದ ಶಿಕ್ಷಕರ ಮತ್ತು ಪದವೀಧರರ ಸ್ವಾಭಿಮಾನ ಹಾಗೂ ಪ್ರಾತಿನಿಧ್ಯದ ಪ್ರತೀಕವಾಗಿ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆಯಲ್ಲಿ ಶಿಕ್ಷಕ ಸಮುದಾಯ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ ಚುನಾಯಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ನೈರುತ್ಯ ಶಿಕ್ಷಕರ ಕ್ಷೇತ್ರ ಇತರ ಶಿಕ್ಷಕರ ಕ್ಷೇತ್ರಕ್ಕಿಂತ ವಿಶಿಷ್ಟವಾದುದ್ದು. ಕರಾವಳಿಯ ಸೊಬಗು, ಕೊಡಗಿನ ಸಿರಿ, ಮಲೆನಾಡಿನ ಘಮ, ದಾವಣಗೆರೆಯ ಸೊಗಸು ಎಲ್ಲವೂ ಈ ಕ್ಷೇತ್ರವನ್ನು ಮೇಳೈಸಿದೆ. ಈ ಕ್ಷೇತ್ರದ ಶಿಕ್ಷಕರು ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಗಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ರಾಜ್ಯದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶದ ಸಾಧನೆಗಳು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದು ಇಲ್ಲಿನ ಶಿಕ್ಷಕರ ವೃತ್ತಿಪರತೆ ಹಾಗೂ ಬದ್ಧತೆಗೆ ಸಾಕ್ಷಿ. ಇಂತಹ ಕ್ಷೇತ್ರದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕ ಸಮುದಾಯ ಹಲವಾರು ಸಮಸ್ಯೆಗಳಿಂದ ಬಳಲಿ ಸೊರಗುತ್ತಿದೆ. ಶೈಕ್ಷಣಿಕ ಕಾರ್ಯಗಳಲ್ಲದೇ ಸಾರ್ವತ್ರಿಕ ಚುನಾವಣೆ, ಜನಗಣತಿ ಇತ್ಯಾದಿ ಕಾರ್ಯಗಳು ಶಿಕ್ಷಕರ ಜವಾಬ್ದಾರಿಯ ಹೆಗಲನ್ನೇರಿದೆ. ಆದರೆ ಅದಕ್ಕೆ ತಕ್ಕಷ್ಟು ಗೌರವ ಸಿಗದಿರುವುದು ಮಾತ್ರ ವಿಷಾದನೀಯ. ಇಂತಹ ತಾರತಮ್ಯದ ವಿರುದ್ಧ ಗಟ್ಟಿ ಧ್ವನಿಯಾಗಿ, ಎಲ್ಲಾ ಶಾಲಾ ಕಾಲೇಜುಗಳ ಶೈಕ್ಷಣಿಕ ಹಾಗೂ ಶಿಕ್ಷಕ ಸಮುದಾಯದ ಧ್ವನಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.
ಅಧ್ಯಾಪನ ವೃತ್ತಿ ಅತ್ಯಂತ ಪವಿತ್ರವಾದುದು. ಭವಿಷ್ಯದ ಸುಂದರ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು. ಶಿಕ್ಷಕ ಯಾವತ್ತೂ ಮಾರಾಟದ ಸರಕಲ್ಲ. ಆದರೆ ಶಿಕ್ಷಕರ ಮತವನ್ನು ಹಣ, ಹೆಂಡ ಇತ್ಯಾದಿ ಆಮಿಷಗಳಿಂದ ಕೊಂಡುಕೊಳ್ಳಬಹುದು. ಈ ಮೂಲಕ ಶಿಕ್ಷಕರ ಕ್ಷೇತ್ರದಲ್ಲಿಯೂ ಚುನಾವಣೆಯನ್ನು ನಡೆಸಬಹುದು ಎಂಬ ಮಾನಸಿಕತೆ ಪ್ರತಿನಿಧಿಸುವ ಅಭ್ಯರ್ಥಿಗಳಲ್ಲಿ ಮೂಡಿರುವುದು ಈ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯನ್ನು ತಂದಿದೆ. ಇದು ಶಿಕ್ಷಕ ಸಮುದಾಯದ ಸ್ವಾಭಿಮಾನವನ್ನು ಕೆದಕಿದೆ. ಆದುದರಿಂದ ಈ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಸಮುದಾಯದ ಮಹತ್ವ ಹಾಗೂ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಗೊಂದಲದ ಗೂಡಾಗಿದೆ. ದಿನದಿಂದ ದಿನಕ್ಕೆ ಈ ಕ್ಷೇತ್ರದ ಸಮಸ್ಯೆಗಳು ಹೆಚ್ಚು ಹೆಚ್ಚು ಸಂಕೀರ್ಣತೆಗೊಳ್ಳುತ್ತಿದೆ. ಇದರಿಂದ ಶಿಕ್ಷಕ ಸಮುದಾಯದ ಗೌರವಕ್ಕೆ ಪ್ರತಿನಿತ್ಯ ಧಕ್ಕೆಯಾಗುತ್ತಿದೆ. ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಶಿಕ್ಷಕರನ್ನು ಜೊತೆಯಾಗಿ ಕೊಂಡೊಯ್ಯುವ ಅವಶ್ಯಕತೆ ಇದೆ. ನಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬಹುದೆಂಬ ಭರವಸೆಯಿಂದ ಆಯ್ಕೆ ಮಾಡಿದ ಪ್ರತಿನಿಧಿಗಳು ನಮ್ಮ ಕೈಗೆಟುಕವಂತಿರಬೇಕು.
ನಮ್ಮ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವಂತವರಿರಬೇಕು. ಆದುದರಿಂದ ಈ ಬಾರಿ ಬದಲಾವಣೆಯ ಅವಶ್ಯಕತೆ ಇದೆ ಎಂಬ ಕೂಗು ಎಲ್ಲಾ ಕಡೆಯಿಂದ ಕೇಳಿ ಬರುತ್ತಿದೆ. ಶಿಕ್ಷಕರೆಲ್ಲರೂ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಇದ್ದಾರೆ. ಕಳೆದ ಸುಮಾರು ೨೦ ವರ್ಷಗಳಿಂದ ಈ ಭಾಗದಲ್ಲಿ ವಿದ್ಯಾರ್ಥಿ ಮುಖಂಡನಾಗಿ, ಅಧ್ಯಾಪಕರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯನಾಗಿಯೂ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕ ಸಮುದಾಯದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ನಿರಂತರ ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ಈ ಮೂಲಕ ಶಿಕ್ಷಕ ಸಮುದಾಯಕ್ಕೆ ಸೂಕ್ತ ನಾಯಕತ್ವವನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇನೆ. ಆದುದರಿಂದ ಎಲ್ಲಾ ಶಿಕ್ಷಕ ಬಂಧುಗಳು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿ ಚುನಾಯಿಸುವ ವಿಶ್ವಾಸವಿದೆ.
ಶಿಕ್ಷಕ ವೃತ್ತಿ ಎಂದಾಕ್ಷಣ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೂಡಿದ ಪವಿತ್ರ ಕಾರ್ಯ ಎನ್ನುವ ಗೌರವವಿದೆ. ಆದರೆ ಶಿಕ್ಷಕ ಕ್ಷೇತ್ರದ ಚುನಾವಣೆಯ ಸಮಯದಲ್ಲಿ ಹಣ, ಉಡುಗೊರೆ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡಿ ಅವರನ್ನು ಸೆಳೆಯುವ ಮೂಲಕ ಅಡ್ಡದಾರಿಯಲ್ಲಿ ಚುನಾವಣೆಯನ್ನು ಗೆಲ್ಲುವ ಪ್ರಯತ್ನ ಬೆಳೆಯುತ್ತಿದೆ. ಇದರಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಕ ಸಮುದಾಯದ ಸಮಸ್ಯೆಗಳನ್ನು ಪ್ರತಿನಿಧಿಸುವುದು ಪ್ರಾಶಸ್ತ್ಯವಾಗಿ ಉಳಿದಿಲ್ಲ. ಇದರಿಂದ ಶಿಕ್ಷಕರ ಸಮಸ್ಯೆಗಳು ಇನ್ನೂ ಕೂಡ ಜೀವಂತವಾಗಿಯೇ ಉಳಿದಿದೆ. ಆದುದರಿಂದ ಶಿಕ್ಷಕರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಶಿಕ್ಷಕ ವೃತ್ತಿಯನ್ನು ಗೌರವಿಸುವ ಮತ್ತು ಅವರ ಸಮಸ್ಯೆಗಳಿಗೆ ನಿರಂತರ ಧ್ವನಿಯಾಗಿ ಕೆಲಸ ಮಾಡುವ ಪ್ರತಿನಿಧಿಯನ್ನು ಆರಿಸಿಕೊಂಡರೆ ಮಾತ್ರ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇದೇ ಕಾರಣದಿಂದ ಶಿಕ್ಷಕರು ತಮ್ಮ ಪ್ರತಿನಿಧಿಯ ಆಯ್ಕೆಯ ಈ ಮಹತ್ವದ ಕಾರ್ಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಮತದಾನವನ್ನು ಮಾಡುತ್ತಾರೆ ಎಂಬ ಭರವಸೆ ಇದೆ. ಆದ್ದರಿಂದ ತಾವೆಲ್ಲರೂ ಈಗಾಗಲೇ ಶಿಕ್ಷಕರ ಪರ ಧ್ವನಿ ಎತ್ತಿ ಕೆಲಸ ಮಾಡಿರುವ, ಮುಂದೆಯೂ ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬಲ್ಲ ನನಗೆ ಮತದಾನ ಮಾಡಿ ಆಯ್ಕೆ ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.