
ಮಂಗಳೂರು ವಿಶ್ವವಿದ್ಯಾನಿಲಯದ ಸೇವೆಯಲ್ಲಿದ್ದು ಈಗ ವಯೋನಿವೃತ್ತಿಯನ್ನು ಹೊಂದಿರುವ ಅನೇಕ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ನಿವೃತ್ತಿಯ ನಂತರದಲ್ಲಿ ದೊರೆಯುವ ಆರ್ಥಿಕ ಸೌಲಭ್ಯಗಳು ದೊರೆಯದೇ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಆಗಸ್ಟ್ 2021 ರಿಂದ ಇದುವರೆಗೆ ಸುಮಾರು 15 ಪ್ರಾಧ್ಯಾಪಕರುಗಳು ಮತ್ತು ಸುಮಾರು 26 ಬೋಧಕೇತರ ಸಿಬ್ಬಂದಿಗಳು ವಯೋನಿವೃತ್ತಿಯನ್ನು ಹೊಂದಿದ್ದು, ಇದುವರೆಗೆ ಅವರುಗಳಿಗೆ ನಿವೃತ್ತಿಯ ನಂತರದಲ್ಲಿ ದೊರಕಲಿರುವ ಗಳಿಕೆ ರಜೆ ನಗದೀಕರಣ ಮತ್ತು ಸಂಚಿತ ನಿಧಿಯ ಸೌಲಭ್ಯಗಳು ದೊರೆಯದೆ ಇದ್ದು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಿಬ್ಬಂದಿ ಸೇವಾ ನಿಯಮದಡಿಯಲ್ಲಿ ಗಳಿಕೆ ರಜಾ ನಗದೀಕರಣ ಮತ್ತು ಸಂಚಯ ನಿಧಿಯ ಆರ್ಥಿಕ ಸೌಲಭ್ಯಗಳನ್ನು ನಿವೃತ್ತಿಯ ನಂತರದಲ್ಲಿ ತಕ್ಷಣವೇ ಪಡೆಯುವುದು ಪ್ರತಿಯೋರ್ವ ಸಿಬ್ಬಂದಿಯ ಮೂಲಭೂತ ಹಕ್ಕು. ಆದರೆ ಮಂಗಳೂರು ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಮೂರು ವರ್ಷಗಳಿಂದ ನಿವೃತ್ತಿ ಹೊಂದಿದ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳ ಆರ್ಥಿಕ ಸೌಲಭ್ಯಗಳನ್ನು ಇತ್ಯರ್ಥ ಪಡಿಸದೇ ಬಾಕಿ ಉಳಿಸಿಕೊಂಡಿದೆ. ಇದರಿಂದ ಅಂತಹ ಸಿಬ್ಬಂದಿಗಳ ಬದುಕು ಅತಂತ್ರಗೊಂದಿದೆ. ಆದುದರಿಂದ ರಾಜ್ಯ ಸರಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜೀ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಒತ್ತಾಯಿಸಿದ್ದಾರೆ.
ಸಿಬ್ಬಂದಿಗಳ ಗಳಿಕೆ ರಜಾ ನಗದೀಕರಣ, ಸಂಚಿತ ನಿಧಿ, ಭವಿಷ್ಯ ನಿಧಿ ಸೇರಿದಂತೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಅದರದ್ದೇ ಆದ ನಿಯಮಾವಳಿಯಂತೆ ವಿನಿಯೋಗಿಸಬೇಕಾದದ್ದು ಉದ್ಯೋಗದಾತನ ಕರ್ತವ್ಯವಾಗಿದೆ. ಇಲ್ಲಿ ವಿಶ್ವವಿದ್ಯಾನಿಲಯವು ಸಿಬ್ಬಂದಿಗಳ ನಿಧಿಯನ್ನು ಸಮರ್ಪಕವಾಗಿ ವಿನಿಯೋಗಿಸದೇ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳೂ ಕೇಳಿ ಬರುತ್ತಿದೆ. ಆದುದರಿಂದ ರಾಜ್ಯ ಸರಕಾರವು ಈ ಪ್ರಕರಣವನ್ನು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಮಾತ್ರವೇ ನೋಡುವುದು ಸೂಕ್ತವಲ್ಲ. ವಿವಿಗಳು ರಾಜ್ಯ ಸರಕಾರದ ಅಧೀನ ಸಂಷ್ಟೆಗಳಾಗಿವೆ. ಉದ್ಯೋಗದಾತನಾಗಿ ವಿವಿಗಳಿಗೆ ಇರುವಷ್ಟೇ ಜವಾಬ್ದಾರಿಯು ರಾಜ್ಯ ಸರಕಾರಕ್ಕಿದೆ. ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಯಾವುದೇ ಹಣಕಾಸಿನ ದುರುಪಯೋಗ ಅಥವಾ ಕರ್ತವ್ಯ ಲೋಪಗಾಗಿದ್ದಲ್ಲಿ ರಾಜ್ಯ ಸರಕಾರವು ಸೂಕ್ತ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ಎಲ್ಲಾ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳಿಗೆ ಸಲ್ಲತಕ್ಕ ಆರ್ಥಿಕ ಸೌಲಭ್ಯಗಳನ್ನು ತಕ್ಷಣವೇ ಒದಗಿಸಲು ರಾಜ್ಯ ಸರಕಾರವು ಮದ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹ ಪಡಿಸಿದ್ದಾರೆ.
